HDBRTS Logo
HDBRTS Logo
HDBRTS Logo
ವಲೋಕನ

ಹುಬ್ಬಳ್ಳಿ-ಧಾರವಾಡ ನಗರಗಳು ಕರ್ನಾಟಕ ರಾಜ್ಯದ ಅವಳಿನಗರಗಳಾಗಿವೆ. ಈ ನಗರಗಳ ನಡುವೆ 22.ಕಿ.ಮೀ.ಅಂತರವಿದೆ. ಈ ಅವಳಿ ನಗರಗಳು ಒಂದೇ ಮಹಾನಗರ ವ್ಯಾಪ್ತಿಗೆ ಒಳಪಟ್ಟಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (ಹುಧಾಮಪಾ) ಯ ಕಾರ್ಯವ್ಯಾಪ್ತಿ 202 ಚ.ಕಿ.ಮೀ. ಈ ಎರಡು ನಗರಗಳ ಒಟ್ಟು ಜನಸಂಖ್ಯೆ 9.4 ಲಕ್ಷ (2011 ರ ಜನಗಣತಿ ಪ್ರಕಾರ).

ಹುಬ್ಬಳ್ಳಿ ನಗರವು ವಾಣಿಜ್ಯ ಕೇಂದ್ರವಾಗಿದ್ದು, ನೈಋತ್ಯ ರೈಲ್ವೆ ವಲಯದ ಕೇಂದ್ರ ಕಛೇರಿ ಹೊಂದಿದೆ. ನಗರಕ್ಕೆ ವಿಮಾನ ಸಂಪರ್ಕವಿದ್ದು ಪ್ರತಿ ದಿನ ಇಲ್ಲಿಂದ ದೂರದ ಬೆಂಗಳೂರು, ಗೋವಾ ನಗರಗಳಿಗೆ ವಿಮಾನ ಸಂಚಾರ ವ್ಯವಸ್ಥೆ ಇದೆ. ಧಾರವಾಡವು ಶೈಕ್ಷಣಿಕ ಕೇಂದ್ರವಾಗಿದ್ದು “ಶಿಕ್ಷಣ ಕಾಶಿ” ಎಂದು ಹೆಸರು ಪಡೆದಿದೆ ಹಾಗೂ ಜಿಲ್ಲಾ ಕೇಂದ್ರವಾಗಿದೆ. ಹುಬ್ಬಳ್ಳಿ-ಧಾರವಾಡ ನಗರಗಳ ನಡುವೆ ವಾಹನಗಳ ದಟ್ಟಣೆ ಅತಿಯಾಗಿದ್ದು ವಾಹನಗಳ ಶೀಘ್ರ ಹಾಗೂ ಸುಲಭ ಸಂಚಾರಕ್ಕೆ ಅಡ್ಡಿಯಾಗಿದೆ. ಪ್ರಸ್ತುತ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಸಾರ್ವಜನಿಕರ ಸಾರಿಗೆಗಾಗಿ ಒಂದು ವ್ಯವಸ್ಥೆಯನ್ನು ಮಾಡಿಕೊಂಡಿದೆ. ಹುಬ್ಬಳ್ಳಿ-ಧಾರವಾಡ ನಗರಗಳ ಮಧ್ಯೆ ಸಂಚರಿಸುವ ಒಟ್ಟು ವಾಹನಗಳ ಸಂಖ್ಯೆಯಲ್ಲಿ ಶೇ 7% ರಷ್ಟು ಮಾತ್ರ ಬಸ್ ಗಳಾಗಿರುತ್ತದೆ. ಆದರೆ ಅವಳಿನಗರಗಳ ಮಧ್ಯೆ ಪ್ರಯಾಣ ಮಾಡುತ್ತಿರುವ ಒಟ್ಟು ಪ್ರಯಾಣಿಕರಲ್ಲಿ ಶೇ. 70% ರಷ್ಟು ಪ್ರಯಾಣಿಕರು ಬಸ್ ಮೂಲಕ ಪ್ರಯಾಣಿಸುತ್ತಾರೆ.

ನಗರ ಭೂ ಸಾರಿಗೆ ನಿರ್ದೇಶನಾಲಯವು ಅವಳಿನಗರಗಳಿಗೆ ಸಮಗ್ರ ಸಾರಿಗೆ ಮತ್ತು ಸಂಚಾರ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯು ಅವಳಿನಗರಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸಾರಿಗೆ ವ್ಯವಸ್ಥೆಯನ್ನು ರೂಪಿಸಲು ಅನುಸರಿಸಬೇಕಾದ ಕಾರ್ಯತಂತ್ರಗಳನ್ನು ಕುರಿತು ವಿವರಿಸಿದೆ. ಅಲ್ಲದೆ ಸುಸ್ಥಿರ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಬಲಪಡಿಸಲು ಹಾಗೂ ಕಡಿಮೆ ದೂರದ ಪ್ರಯಾಣಗಳಿಗೆ ಸೈಕಲ್ ಹಾಗೂ ನಡಿಗೆಗಳಿಗೆ ಈ ಯೋಜನೆ ಒತ್ತು ನೀಡಿದೆ. ಸಮಗ್ರ ಸಂಚಾರ ಮತ್ತು ಸಾರಿಗೆ ಯೋಜನೆ ವರದಿಯು ಸಮೂಹ ಸಾರಿಗೆಯ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸದಿರುವ ಪಕ್ಷದಲ್ಲಿ ಸಮೂಹ ಸಾರಿಗೆಯ ಪಾಲು ಸಹಜವಾಗಿ ಕಡಿಮೆಯಾಗುವುದಾಗಿ ಸೂಚಿಸಿದೆ. ಈ ಹಿನ್ನಲೆಯಲ್ಲಿ ಭೂ ಸಾರಿಗೆ ನಿರ್ದೇಶನಾಲಯವು ಹುಬ್ಬಳ್ಳಿ-ಧಾರವಾಡ ನಡುವೆ ತ್ವರಿತ ಬಸ್ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಸಾಧ್ಯತಾ ವರದಿ ಹಾಗೂ ಅನುಷ್ಠಾನ ಯೋಜನೆಯನ್ನು ತಯಾರಿಸುವ ಕಾರ್ಯವನ್ನು ಕೈಗೊಂಡಿತು.

ಈ ಪ್ರಸ್ತಾವನೆಯನ್ನು ವಿಶ್ವ ಬ್ಯಾಂಕ್ ಹಾಗೂ ಗ್ಲೋಬಲ್ ಎನ್ವಿರಾನ್ಮೆಂಟಲ್ ಫೆಸಿಲಿಟಿ (GEF) ನೆರವು ಹೊಂದಿರುವ ಸುಸ್ಥಿರ ನಗರ ಸಾರಿಗೆ ಯೋಜನೆ (Sustainable Urban Transport Project,) ಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ದೊರಕಿದ್ದು, ರಾಜ್ಯ ಸರ್ಕಾರವು ಕೂಡ ಯೋಜನೆಯ ಅನುಷ್ಠಾನಕ್ಕೆ ಅನುಮೋದನೆ ನೀಡಿದೆ.